ನಗುವಿನ ಬಗ್ಗೆ ನಿಮಗೆ ಗೊತ್ತಿರದ 8 ಸಂಗತಿಗಳು

                                                      ನಗು

 'ನಗು' ಎಂದು ಓದಿದ ತಕ್ಷಣ ನಿಮ್ಮ ಮೊಗದಲ್ಲಿ ನಗು ಮೂಡಿತೇ..?
ನಗು ಯಾರಿಗೆ ಗೊತ್ತಿಲ್ಲ, ಹೇಳಿ.. ಮಗುವಿನಿಂದ ಹಿಡಿದು ಮುದುಕರವರೆಗೆ ಎಲ್ಲರೂ ನಗುವಿನ ಅಲೆಯಲ್ಲಿ ತೇಲಾಡಿದವರೆ ಅಲ್ಲವೇ? ಹಾಗಿದ್ದರೆ ನಗುವಿನ ಬಗ್ಗೆ ನಿಮಗೆಷ್ಟು ಗೊತ್ತು ನೋಡೋಣ ಬನ್ನಿ.

   ನಗುವಿನ ಬಗ್ಗೆ ನಿಮಗೆ ಗೊತ್ತಿರದ 8 ಸಂಗತಿಗಳು

1.  ನಗುವುದು ಒಂದು ಸಾಂಕ್ರಾಮಿಕ:- 

                            ಹೌದು ಇದು ನಿಜ. ಅಯ್ಯಯ್ಯೋ...? ಭಯಪಡಬೇಡಿ. ಇದು ಕಹಿ ಅಲ್ಲ ಸಿಹಿ ಸತ್ಯ. ಅಂದರೆ ನಗು ಆರೋಗ್ಯವನ್ನು ಹೆಚ್ಚಿಸುವ ಸಾಂಕ್ರಾಮಿಕ. 
                                           ಒಂದು ಹೊಸ ಅಧ್ಯಯನದ ಪ್ರಕಾರ "ನಾವು ನಗುವ ವ್ಯಕ್ತಿಯನ್ನು ನೋಡಿದಾಗ ಅವರ ಮುಖಭಾವವನ್ನು ಅರ್ಥೈಸಿಕೊಳ್ಳಲು ನಮ್ಮ ಮೆದುಳು ಆ ನಗುವನ್ನು ಮರುಸೃಷ್ಟಿ ಮಾಡುತ್ತದೆ". ಆಗ ನಮ್ಮಲ್ಲೂ ಒಂದು ಸಣ್ಣ ನಗು ಸುಳಿಯುತ್ತದೆ. ಹೀಗೆ ನಗು ಎಲ್ಲರಿಗೂ ಹರಡುತ್ತದೆ. ಆಯಿತಲ್ಲವೇ ನಗು ಸಾಂಕ್ರಾಮಿಕ ಎಂದು.

2. ಮನುಷ್ಯ ಹುಟ್ಟುವಾಗಲೇ ನಗುವುದನ್ನು ಕಲಿತಿರುತ್ತಾನೆ:- 

                             ಮಗು ಸುತ್ತಮುತ್ತಲಿನ ಪರಿಸರವನ್ನು & ಧ್ವನಿಯನ್ನು ಕೇಳಿ ಅದನ್ನು ಅನುಸರಿಸಲು ಪ್ರಯತ್ನಿಸುತ್ತದೆ. ಇದು ನಿಮ್ಮನ್ನು ಸೇರಿಸಿ ಎಲ್ಲರಿಗೂ ತಿಳಿದಿದೆ. ಆದರೆ ಹುಟ್ಟಿನಿಂದಲೇ ಮಗು ಕಲಿತಿರುವ ಮುಖಭಾವವೆಂದರೆ ಅದು ನಗು. ಅದಕ್ಕೆ ಉದಾಹರಣೆ ಎಂದರೆ ಅಂಧರೂ ಕೂಡ ನಗುತ್ತಾರೆ. 

3. ನಗು ನಿಮ್ಮನ್ನು ಸುಂದರ & ಆಕರ್ಷಕರನ್ನಾಗಿಸುತ್ತದೆ:- 

                                70%  ನಗುಮುಖದವರೂ ಸಿಂಗಾರ ಮಾಡಿಕೊಂಡವರಿಗಿಂತ ಚೆಂದವಾಗಿ ಕಾಣುತ್ತಾರೆ. ನಗು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಖಿನ್ನತೆಯನ್ನು ಕಡಿಮೆ ಮಾಡುತ್ತದೆ & ವಯಸ್ಸನ್ನು ಸಹಜವಾಗಿಯೇ ಮರೆಮಾಚುತ್ತದೆ.

4. ಹೆಂಗಸರು ಗಂಡಸರಿಗಿಂತ ಹೆಚ್ಚಾಗಿ ನಗುತ್ತಾರೆ:- 

                                   ಇದರಲ್ಲೇನು ವಿಶೇಷ.... ಅಂದುಕೊಳ್ಳಬೇಡಿ. ಇದೆ, ವಿಶೇಷವಿದೆ...  ಹೆಂಗಸರು ಬೇರೆಯವರ ಗಮನವನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲು ನಗುತ್ತಾರೆಯೆಂದು ಕೆಲವರ ನಂಬಿಕೆ ಇದೆ. ಅದು ಸುಳ್ಳು. 
                                   ಈಗತಾನೇ  ಹೆಜ್ಜೆಯಿಡುತ್ತಿರುವ ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚಾಗಿ ನಗುತ್ತಾರೆಂದು ಇತ್ತೀಚಿನ ಅಧ್ಯಯನದಲ್ಲಿ ತಿಳಿಸಲಾಗಿದೆ. ಅದಕ್ಕೆ ಕಾರಣ ಹೆಣ್ಣು ಗಂಡಿಗಿಂತ ಹೆಚ್ಚು ಭಾವನಾತ್ಮಕಳು. ತಕ್ಷಣವೇ ಭಾವನೆಯನ್ನು ಸೂಚಿಸುತ್ತಾಳೆ. 

5. ನಾವು ನಗುವನ್ನು ದೂರದಿಂದ ಗುರುತಿಸಬಲ್ಲೆವು:- 

                                              ಮನುಷ್ಯರು ನಗುವನ್ನು ಸುಮಾರು 300 ಅಡಿ  ಅಥವಾ ಅದಕ್ಕೂ ದೂರದಿಂದ ಗುರುತಿಸುತ್ತಾರೆ. ಈ ಸಾಮರ್ಥ್ಯ ಮನುಷ್ಯ ತನ್ನ ಮಿತ್ರ & ಶತ್ರುಗಳನ್ನು ಗುರುತಿಸುವುದಕ್ಕಾಗಿ ಬೆಳೆದು ಬಂದಿದೆ. 

6. ಇಡೀ ಜಗತ್ತಿನಲ್ಲಿ ಸಂತೋಷಕ್ಕಿರುವ ಒಂದೇ ಒಂದು ಸಾರ್ವತ್ರಿಕ ಭಾಷೆಯೆಂದರೆ ಅದು ನಗು:-

                                     ಎಷ್ಟೋ ಸಲ ನೀವು ಭಾಷೆ ಗೊತ್ತಿಲ್ಲದ ಜಾಗಕ್ಕೆ ಭೇಟಿ ಕೊಟ್ಟಾಗ ನಿಮಗೆ ಈ ಅನುಭವ ಆಗಿರಬಹುದು. ಅಲ್ಲಿ ಅವರ ಮಾತು ನಿಮಗೆ ನಿಮ್ಮ ಮಾತು ಅವರಿಗೆ ಅರ್ಥವಾಗದೆ ಪೇಚಾಡಿದ ಪ್ರಸಂಗವು ಬಂದಿರುತ್ತದೆ. ಅಲ್ಲಿ ನಗುವೊಂದೇ ಬರಮಾಡಿಕೊಳ್ಳುವ & ಧನ್ಯವಾದ ಹೇಳುವ ಭಾಷೆಯಾಗಿರುತ್ತದೆ. 
                                    ನಗು ಭಾಷೆ, ಜಾತಿ-ಮತ ನೆಲ-ಜಲ ವರ್ಣಭೇದಗಳಲ್ಲೂ ಸಾರ್ವತ್ರಿಕವಾಗಿ ಉಳಿದಿದೆ. 

7. ನಗು ನಿಮಗೆ ಬಡ್ತಿಯನ್ನು ತಂದುಕೊಡಬಹುದು:-

                                      ಒತ್ತಡದ ಕೆಲಸದಲ್ಲಿ ಹೆಚ್ಚಾಗಿ ನಗುವವರು ಪ್ರಾಮಾಣಿಕರು, ಆತ್ಮವಿಶ್ವಾಸಿಗಳು ಹಾಗು ಸಾಮಾಜಿಕವಾಗಿ ಉತ್ತಮರಾಗಿರುತ್ತಾರೆ. ಅಂತಹವರಿಗೆ ಬಡ್ತಿ ದೊರಕುವ ಬಹಳಷ್ಟು ಅವಕಾಶಗಳು ಸಿಗುತ್ತವೆ ಎಂದು ನಂಬಲಾಗಿದೆ. 
                        ಇಲ್ಲಿ ನೀವು ನಿಜವಾದ ನಗುವನ್ನು ಮಾತ್ರ ಪರಿಗಣಿಸಬೇಕು. ನಾಟಕೀಯವಾಗಿ ನಗುವರು ಹೆಚ್ಚಿನ ಸಮಯ ಪ್ರಭಾವ ಬೀರುವುದಿಲ್ಲ. 

8.ವಿಶ್ವದ ನಗುವಿನ ದಿನ:- 

                            ಕೇವಲ ಒಂದೇ ದಿನ ನಗುವಿಗೆ ಮಹತ್ವ ನೀಡಬಾರದು. ಪ್ರತಿದಿನ ನಗುವವರು ಆರೋಗ್ಯವನ್ನು ವೃದ್ಧಿಸಿಕೊಂಡು ಸಂಬಂಧಗಳನ್ನು ಗಟ್ಟಿಗೊಳಿಸುತ್ತಾರೆ.ನಗುವಿನ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ಅಕ್ಟೊಬರ್ ತಿಂಗಳಲ್ಲಿ ಬರುವ ಮೊದಲನೇ ಶುಕ್ರವಾರದಂದು ವಿಶ್ವದ ನಗುವಿನ ದಿನವನ್ನು ಆಚರಿಸಲಾಗುತ್ತದೆ. 

~  ಆಶಯ ~

ಮಾತು ನಗುವಿಗೆ ಪ್ರಮುಖ ಕಾರಣ ಆದರೆ ಕಾಲ ಬದಲಾದಂತೆ ನಾವು ನೀವೆಲ್ಲರೂ ಮೌನಿಗಳಾಗುತ್ತಿದ್ದೇವೆ. ಕೆಲಸದ ಒತ್ತಡವನ್ನು ಹೊತ್ತು ವೇಗದ ಜಗದಲ್ಲಿ ನಾವೆಲ್ಲಿ ಹಿಂದೆ ಬೀಳುತ್ತೇವೆಂದುಕೊಂಡು ಓಡುತ್ತಲೇ ಸೋತುಹೋಗುತ್ತಿದ್ದೇವೆ. ಅದಕ್ಕೆ ಅವಕಾಶ ನೀಡದೆ ಜೀವನ ನಿಮಗೆ ಕೊಡುವ ಎಲ್ಲ ಸಂತೋಷಗಳನ್ನು ಮುಕ್ತವಾಗಿ ನಕ್ಕು ಆನಂದಿಸಿ ಗೆಲ್ಲಿರಿ.
            
        
          ನಿಮಗೆ ನಗುವಿನ ಬಗ್ಗೆ ತಿಳಿದಿರುವ ವಿಶಿಷ್ಟ ಸಂಗತಿಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ. 
          ನಾನು ಮತ್ತೆ ಯಾವ ವಿಷಯದ ಬಗ್ಗೆ ಪೋಸ್ಟ್ ಮಾಡಬೇಕೆಂದು ತಪ್ಪದೆ ಕಾಮೆಂಟ್ ಮಾಡಿ.


ಕಾಮೆಂಟ್‌ಗಳು